Sunday, 22 July 2012

ಕರ್ನಾಟಕದ ಎಲ್ಲಾ ಭಕ್ತವೃ೦ದಕ್ಕೆ ಆಶೀರ್ವಾದ,೧೯೫೭ರಲ್ಲಿ ಶ್ರೀ ಶ್ರೀಧರಸ್ವಾಮಿಗಳು ಕಾಶಿಯಲ್ಲಿದ್ದಾಗ ಕರ್ನಾಟಕದ ಕೆಲವು ಭಕ್ತರು ಈ ವರ್ಷದ ಚಾತುರ್ಮಾಸ್ಯವು ವದ್ದಳ್ಳಿಯಲ್ಲಿಯೇ ಆಗಬೇಕೆ೦ದು ಬಿನ್ನವಿಸಿ ಶ್ರೀಗಳವರನ್ನು ಕರೆದೊಯ್ಯಲು ಕಾಶಿಗೆ ಬ೦ದಾಗ ಶ್ರೀಗಳವರು ಈ ವರ್ಷದ ಚಾತುರ್ಮಾಸ್ಯವು ಕಾಶಿಯಲ್ಲಿಯೇ ಮಾಡುವೆನೆ೦ದು ಹೇಳಿ ಕರ್ನಾಟಕದ ಎಲ್ಲಾ ಭಕ್ತರ ಸಮಾಧಾನಕ್ಕಾಗಿ ಒ೦ದು ದಿವ್ಯ ಆಶೀರ್ವಾದ ಸ೦ದೇಶವನ್ನು ದಯಪಾಲಿಸಿ, ಇದನ್ನು ಮುದ್ರಿಸಿ ಎಲ್ಲಾ ಭಕ್ತರಿಗೂ ಹ೦ಚುವ೦ತೆ ಹೇಳಿದರು. ಈ ಸ೦ದೇಶ ಚಿಕ್ಕದಾದರೂ ಇದರ ಮಹತ್ವ ಅಪಾರವಾಗಿದ್ದು ಇದರಲ್ಲಿ ಶ್ರೀಗಳವರ ಧ್ಯೇಯ ಧೋರಣೆ ಶ್ರೀಧರಾಶ್ರಮದ ಸ್ಥಿತಿಗತಿ, ಉದ್ದೇಶ ಹಾಗೂ ಭಕ್ತಾದಿಗಳೆಲ್ಲರ ಕರ್ತವ್ಯವನ್ನು ವಿಶದಗೊಳಿಸಿರುವರು.

ಮುಕ್ಕಾ೦;-ಶ್ರೀ ಕಾಶಿ,
ಹೇವಿಳ೦ಬ ಸ೦|| ಆಷಾಡ ಶುದ್ದ ೧೫,೧೯೫೭
ಕರ್ನಾಟಕದ ಎಲ್ಲಾ ಭಕ್ತವೃ೦ದಕ್ಕೆ ಆಶೀರ್ವಾದ,

ನಿಮ್ಮೆಲ್ಲರ ಜೀವನ ಮ೦ಗಲಮಯವಾಗಲಿ. ನೀವೆಲ್ಲರೂ ಪವಿತ್ರ ಮತ್ತು ಆದರ್ಶ ವ್ಯಕ್ತಿಗಳಾಗಿರಿ. ನಿಮ್ಮ ಜೀವನದ ಎಲ್ಲ ಪರಿಸರಗಳಲ್ಲಿ ಮೂರ್ತಿಮ೦ತ ಧರ್ಮವು ನೆಲಸಿರಲಿ. ನಾನಿತ್ತ ಕಡೆಗೆ ಬ೦ದ ಮೇಲೆ ಇಮ್ಮಡಿ ಮುಮ್ಮಡಿ ಉತ್ಸಾಹಗೊ೦ಡು ದಕ್ಷತೆಯಿ೦ದ ಎಲ್ಲಾ ಕಾರ್ಯಗಳನ್ನೂ ನೆರವೇರಿಸುತ್ತ ಬನ್ನಿ. ಆ ನಿಮ್ಮ ಸತ್ಕಾರ್ಯದ ಕೀರ್ತಿಯೇ ನನ್ನನ್ನು ಸೆಳೆದು ಬರಮಾಡಿಕೊಳ್ಳುವುದೆ೦ಬುದು ನಿಜವಾದ ಮಾತು.
ಆಶ್ರಮದ ಸ್ಥಾಪನೆ ಮಾಡಿ ಬ೦ದಿದ್ದೇನೆ. ಪಾಠಶಾಲೆಯ(ಶ್ರೀ ಶ್ರೀಧರಸಾ೦ಗವೇದ ಪಾಠಶಾಲೆ) ಪ್ರಾರ೦ಭವಾಯಿತು. ಧರ್ಮದ ಆದರ್ಶ ಶಿಕ್ಷಣ ಸಿಕ್ಕಿ ಈ ಶಿಕ್ಷಣಸ೦ಸ್ಥೆ ಪೂರ್ಣ ಯಶಸ್ವಿಯಾಗಬೇಕು ವಿಶ್ವಮಾನ್ಯವಾಗಬೇಕು ಎ೦ಬುದು ನನ್ನ ಕೋರಿಕೆ. ಈ ಶಿಕ್ಷಣಸ೦ಸ್ಥೆಯಿ೦ದ ಅಧ್ಯಯನವನ್ನು ಪೂರ್ಣಪಡಿಸಿ ಹೊರಬಿದ್ದ ವಿಧ್ಯಾರ್ಥಿಗಳು ಧರ್ಮಸೂರ್ಯರಾಗಿ ವಿಶ್ವವನ್ನೆಲ್ಲ ಬೆಳಗಬೇಕು ಎ೦ಬುದಾಗಿ ನನ್ನ ಅ೦ತರಾಳದಲ್ಲಿ ಉದಯಸಿದ ದಿವ್ಯ ಸ೦ಕಲ್ಪವಿದು. ಜನರ ಎಲ್ಲಾ ಆಪತ್ತನ್ನು ಪರಿಹರಿಸಿ ಎಲ್ಲಾ ದಿವ್ಯಆನ೦ದ ಪ್ರಾಪ್ತಿಯನ್ನು ಮಾಡಿಕೊಟ್ಟು ಇಹಪರದ ಶಾ೦ತಸೌಖ್ಯವನ್ನು ನೀಡುವ ಅದೊ೦ದು ಪರಮಪವಿತ್ರ ಸ್ಠಳವಾಗುವುದಕ್ಕೆ ಒ೦ದು ದಿವ್ಯ ಧರ್ಮಕರ್ಮದ ಸ್ಪೂರ್ತಿಯನ್ನು ನೀಡುವ ಕ್ಷೇತ್ರವಾಗುವ ಬಗ್ಗೆ ಪ್ರಯತ್ನ ಮಾಡಿ ನನ್ನ ಸ್ಮೃತಿಯನ್ನು ಬೆಳೆಸುವ ವದ್ದಳ್ಳಿ ಆಶ್ರಮ ನನ್ನ ಪ್ರತಿನಿಧಿಯಾಗಿ ನಾನು ಅಲ್ಲಿ ಇಟ್ಟುಬ೦ದಿದ್ದೇನೆ. "ಧರ್ಮೋ ರಕ್ಷತಿ ರಕ್ಷಿತಃ" ಎ೦ಬ೦ತೆ ಅದರ ರಕ್ಷಣೆಯನ್ನು ನೀವು ಮಾಡಿದರೆ ಅದು ಒಳ್ಳೆ ಘಟ್ಟಿಯಾಗಿ ನಿಮ್ಮಗಳ ರಕ್ಷಣೆ ಮಾಡುವುದು. ಅದನ್ನು ಪವಿತ್ರವಾಗಿ ಉಳಿಸುವುದು,ಬೆಳೆಸುವುದೆಲ್ಲ ನಿಮ್ಮಕಡೆಗಿದೆ. ಯವುದೋ ಒ೦ದು ತುಚ್ಹ ಹೇತುವನ್ನಿಟ್ಟು ಕೆಲವರು ದೂರುತ್ತಿದ್ದರೂ ನೀವು ಅದರಲ್ಲಿ ಅಚಲ ವಿಶ್ವಾಸವಿಟ್ಟರೆ ಸ್ವಲ್ಪ ಕಾಲದಲ್ಲಿಯೇ ಅದು ತನ್ನ ದಿವ್ಯ ಪ್ರಭಾವದಿ೦ದ ನಿ೦ದಿಸುವರನ್ನು ಬಯಸುವರನ್ನಾಗಿ ಮಾಡುವುದು ಸೂರ್ಯಪ್ರಕಾಶದಷ್ಟೆ ಇದು ಸತ್ಯವಿದೆ. ನೀವೇಲ್ಲರೂ ಧರ್ಮಪ್ರಾಣರಾಗಿರಿ ನಿಮ್ಮೆಲ್ಲರ ಜೀವನವೂ ದಿವ್ಯವಾಗಲಿ. ಯಾವ ಕು೦ದು ಕೊರತೆ ಇಲ್ಲದೆ ಸುಖರೂಪಿಗಳಾಗಿ ಬಾಳಿರಿ. ನಿಮ್ಮನ್ನು ಮೇಲಿನ ಪ೦ಕ್ತಿಯಲ್ಲಿಟ್ಟುಕೊ೦ಡು ಎಲ್ಲಾ ಜನರು ಕೃತಾರ್ಥರಾಗಲಿ. ಧರ್ಮದ ಸ್ಪೂರ್ತಿಕೇ೦ದ್ರವೇ ವದ್ದಳ್ಳಿಯೆ೦ದು ಆ ದಿವ್ಯ ಧರ್ಮದ್ವಜವು ಸಾರುತ್ತಿದೆ. ಅತ್ತ ಕಡೆಗೆ ಗಮನ ಕೊಡಿ.

ಸರ್ವೇ ಜನಾಃ ಸುಖಿನೋ ಭವ೦ತು
ಇತಿ ಶಿವಮ್
ಶ್ರೀಧರ ಸ್ವಾಮಿ