Monday, 6 August 2012

ಸಿಗರೇಟು ಹೇಳಿದ ಬುದ್ಧಿಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ. 

ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು.  ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು.  ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ   ಹೇಳಬೇಕು" ಎಂದು ಸ್ವಲ್ಪ ಅಹಂಕಾರ  ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ?   ಇರಲಿ.  ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು.  ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.

" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು  ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ?  ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ?  ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು.   ಆಕೆಗಂತೂ ದಿಕ್ಕೇ ತೋಚಲಿಲ್ಲ.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು.   ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ?  ನಿನಗೆ ಗೊತ್ತಿಲ್ಲವೇ?  ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ?  ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು."  ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು   ಆ ಯಜಮಾನರ ಕಣ್ಣು ತುಂಬಿ ಬಂತು.  ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.

 ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ.  ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ.  ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು  ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು. 

ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು.  ಅವರ ಗುಣದೋಷಗಳನ್ನು  ಸರಿಯಾದ ಸಮಯದಲ್ಲಿ  ಎತ್ತಿ ಹಿಡಿದಿದ್ದರು.  ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು.  ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.
-H.N.ಪ್ರಕಾಶ್

ಗೃಹಪ್ರವೇಶ
ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ   ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು.  ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.

ಗುರುನಾಥರು : ಏನ್ಸಾರ್, ಬಂದಿದ್ದು?

ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.

ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ?  ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.

ಗುರುಬಂಧು   ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.

ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ?  ಗಾರೆ ಕೆಲಸದವನು, ಲೈಟ್   ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ!  ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ  ಪ್ರಶ್ನೆ ಮಾಡಿದರು.

ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು  ನಕ್ಕರು.

ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?" 

ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.

ಗುರುನಾಥರು  : " ಎಲ್ಲರನ್ನು ಕರೆದು ಊಟ ಹಾಕಬೇಕು!  ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು. 

ಗುರುಬಂಧು  ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."

ಗುರುನಾಥರು  " ಅಂದರೆ,  ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ,   ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.

ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ  ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ?  ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ?  ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ.  ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ   ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.

ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು.  ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು.  ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ.  ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ  ಹೊರಟರು.

 "ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು.  ಅಲ್ಲವೇ ಸಾರ್? " ಎಂದರು ಗುರುನಾಥರು.

ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ.  ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.

-H.N.ಪ್ರಕಾಶ್